ಅಬೆಲಾರ್ಡ್, ಪೀಟರ್

	ಯೂರೋಪಿನ ಮಧ್ಯಯುಗದ ತಾತ್ತ್ವಿಕರಲ್ಲಿ ಹೆಸರುವಾಸಿಯಾದವ (1079-1142). ಜನ್ಮಸ್ಥಾನ ಬ್ರಿಟನ್. ಇವನ ತತ್ತ್ವ ಸಿದ್ಧಾಂತಗಳಿಗಿಂತಲೂ ಇವನ ತಾತ್ತ್ವಿಕ ವ್ಯಕ್ತಿತ್ವ ಜನರನ್ನು ಹೆಚ್ಚಾಗಿ ಆಕರ್ಷಿಸಿತು. ಈತ ಕ್ರೈಸ್ತ ಸಂನ್ಯಾಸಿ. ತಾನು ಪ್ರೀತಿಸಿದ ಹೆಲಾಯ್‍ಳನ್ನು ಸಂನ್ಯಾಸಿಯಾದ ತಾನು ಮದುವೆಯಾಗಲು ನಿಷಿದ್ಧವಾದುದರಿಂದ ಅವಳನ್ನೂ ಸಂನ್ಯಾಸಿನಿಯಾಗುವಂತೆ ಪ್ರೇರಿಪಿಸಿ ತನ್ನ ವಿಚಾರದೃಷ್ಟಿಗೆ ಸರಿಹೋದ ರೂಪದಲ್ಲಿ ಕ್ರೈಸ್ತ ಧರ್ಮವನ್ನು ಬೋಧಿಸಿದ. ಈತ ರಚಿಸಿದ ಸಿಕ್ ಎಟ್ ನಾನ್ ಎಂಬ ಗ್ರಂಥದ ಉದ್ದೇಶ ಪ್ರಶ್ನೆಯನ್ನು ಕೆರಳಿಸುವುದಾಗಿತ್ತು. ಕ್ರೈಸ್ತವೇದದಿಂದಲೂ ಚರ್ಚಿನ ಹಿರಿಯರಿಂದಲೂ ಹೇಳಿಕೆಗಳನ್ನು ಸಂಗ್ರಹಿಸಿ ಅವಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಗ್ರಂಥದಲ್ಲಿ ರೂಪಗೊಳಿಸಲಾಗಿದೆ. ಇಲ್ಲಿ ಕ್ರೈಸ್ತಧರ್ಮದ ವಿಚಾರವಾಗಿ ಲೇಖಕ ತನ್ನ ಹೃದಯವನ್ನು ತೆರೆದಿಟ್ಟಿದ್ದಾನೆ. ಸೇಂಟ್ ಪೌಲನಿಗೆ ವ್ಯತಿರಿಕ್ತವಾಗಿ ಸಿದ್ಧಾಂತ ಮಾಡಬೇಕಾಗಿ ಬಂದ ಪಕ್ಷದಲ್ಲಿ ನಾನು ತತ್ತ್ವ ವಿವೇಚನೆಯನ್ನಾದರೂ ಬಿಟ್ಟೇನು, ಪೌಲನನ್ನು ಬಿಡಲೊಲ್ಲೆ, ಕ್ರಿಸ್ತನ ಸುವಾರ್ತೆಯನ್ನು ಸಮರ್ಥಿಸಲಾಗದ ನಾನೊಬ್ಬ ಅರಿಸ್ಟಾಟಲ್ ಆಗಲೊಪ್ಪೆನು. ಕ್ರಿಸ್ತನನ್ನು ಬಿಟ್ಟರೆ ನನಗೆ ವಿಮೋಚನೆಯೇ ಇಲ್ಲ. ಇವನ ವಿಚಾರಪರತೆಯನ್ನು ಕಂಡು ಬೆಚ್ಚಿ ಇವನನ್ನು ಚರ್ಚಿನ ನ್ಯಾಯಕ್ಕೆ ಒಳಪಡಿಸಿ ಕಾರಾಗೃಹಕ್ಕೆ ದೂಡಿದ್ದಕ್ಕೆ ಇವನು ಪ್ಲೇಟೋವಿನಲ್ಲಿ ತೋರಿಸಿದ ವಿಶ್ವಾಸದ ಮುಖ್ಯ ಕಾರಣ. ಕ್ರೈಸ್ತ ತ್ರಿಮೂರ್ತಿ ತತ್ತ್ವದ ವಿಚಾರದಲ್ಲಿ ಮೋಸಸ್‍ಗಿಂತಲೂ ಪ್ಲೇಟೊವಿನ ತತ್ತ್ವ ಸಮಂಜಸವೆಂದೂ ಪ್ಲೇಟೊ ಕ್ರೈಸ್ತಧರ್ಮ ತತ್ತ್ವಗಳನ್ನು ಮೋಸಸ್‍ಗಿಂತಲೂ ಚೆನ್ನಾಗಿ ಮೊದಲೇ ಅರಿತಿದ್ದ ಎಂದೂ ಈತ ಸಾರಿದ. ಇದನ್ನು ಕೇಳಿದ ಅವನ ಶಿಷ್ಯರು ಆಹ್ಲಾದದಿಂದ ಕುಣಿದರು. ಕ್ರೈಸ್ತ ಸಂಪ್ರದಾಯ ಶರಣರು ಇದರಿಂದ ಕೆರಳಿದರು. ಹೂಣವಾದಿ ಪ್ಲೇಟೊವನ್ನು ಕ್ರಿಸ್ತನಿಗಿಂತ ಉತ್ತಮನೆಂದೂ ಕರೆದ ಈ ಪಾಷಂಡಿಯನ್ನು ಕಾರಾಗೃಹಕ್ಕೆ ನೂಕಿದ್ದು ಅವನಿಗೆ ಅವನ ಶತ್ರುಗಳು ತೋರಿಸಿದ ಕೃಪೆ. ಅವನು ಇನ್ನೂ ಹೆಚ್ಚು ಶಿಕ್ಷೆಗೆ ಅರ್ಹನೆಂದು ಅವರಲ್ಲಿ ಕೆಲವರು ಹೇಳಿದುದೂ ಉಂಟು. ಅಸಂಖ್ಯಾತ ಶಿಷ್ಯರನ್ನು ಆಕರ್ಷಿಸಿದ ಗುರು ಈತ. ಇವ ತನ್ನದೇ ಆದ ಸಂನ್ಯಾಸಿಗಳ ಆಶ್ರಮವನ್ನು ಏರ್ಪಡಿಸಿ ಆತುರದಿಂದ ಅದಕ್ಕೆ ಬಂದು ಸೇರಿದ ಅನೇಕರಿಗೆ ತನ್ನ ತತ್ತ್ವವನ್ನು ಬೋಧಿಸಿದ. ಹಾಗೆಯೇ ಅವನ ಪ್ರಿಯಶಿಷ್ಯೆ ಹೆಲಾಯ್ ಹೆಂಗಸರಿಗಾಗಿ ಸಂನ್ಯಾಸಿನಿಯರ ಆಶ್ರಮವನ್ನು ಏರ್ಪಡಿಸಿದಳು. ಅವಳು ತೀರಿಕೊಂಡ ಸ್ವಲ್ಪ ಕಾಲದಲ್ಲೇ ಅವನೂ ತೀರಿಕೊಂಡ. ಪ್ಯಾರಿಸ್ಸಿನ ಸಮಾಧಿಭೂಮಿಯೊಂದರಲ್ಲಿ ಒಂದರ ಪಕ್ಕದಲ್ಲೊಂದು ಇವರ ಸಮಾಧಿಗಳಿವೆ. ಅಬೆಲಾರ್ಡನ ಗ್ರಂಥಗಳು ಥಿಯೋಲಾಜಿಕಾ, ಕ್ರಿಶ್ಚಿಯಾನ ಮೊದಲಾದ ಮತಕ್ಕೆ ಸಂಬಂದಪಟ್ಟ ಗ್ರಂಥಗಳು, ಪೋರ್ಪೆರಿ ಮೇಲಿನ ವ್ಯಾಖ್ಯಾನ, ನೀತಿಗೆ ಸಂಬಂಧಪಟ್ಟವು - ಹೀಗೆ ವೈವಿಧ್ಯಮಯವಾಗಿವೆ.													
(ಎಂ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ